ಏಕೀಕರಣ ಚಳವಳಿ ಮತ್ತು ಸಾಹಿತ್ಯ
ಏಕೀಕರಣ ಚಳವಳಿ ಮತ್ತು ಸಾಹಿತ್ಯ
ಅನೇಕತೆಯಲ್ಲಿ ಏಕತೆ ಎಂಬ ವೈಶಿಷ್ಟ್ಯತೆಯ ಪರಂಪರೆಯನ್ನುಳ್ಳ ಭಾರತವು 29 ರಾಜ್ಯಗಳು, 07 ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡ ಗಣರಾಜ್ಯವಾಗಿದ್ದು, ಕರ್ನಾಟಕವು ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದಾಗಿದೆ. ಅನೇಕ ಮಹನೀಯರು ತಮ್ಮ ಶ್ರಮ, ತ್ಯಾಗ, ಹೋರಾಟಗಳ ಮೂಲಕ ಹಲವಾರು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕದ ಪ್ರದೇಶಗಳನ್ನು ಏಕೀಕರಣಗೊಳಿಸಿ ಇಲ್ಲಿಯ ನಾಡು, ನುಡಿ, ನೆಲ, ಜಲ ಹಾಗೂ ಸಂಸ್ಕøತಿಗಳಿಗೆ ಅನನ್ಯತೆಯನ್ನು ತಂದುಕೊಟ್ಟರು. ಆದರೆ ಇಂದು ಕೆಲವರ ಸ್ವಾರ್ಥಸಾಧನೆಯ ರಾಜಕೀಯ ಲಾಭ ಹಾಗೂ ದುಷ್ಕøತ್ಯಗಳಿಂದಾಗಿ ಏಕೀಕರಣ ಚಳವಳಿಯ ಮೂಲಕ ಕಟ್ಟಿದ ಅಖಂಡ ಕರ್ನಾಟಕದ ಏಕತೆಗೆ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಆದುದ್ದರಿಂದ ‘ಏಕೀಕರಣ ಚಳವಳಿ ಮತ್ತು ಸಾಹಿತ್ಯ’ ಎಂಬ ವಿಷಯದ ಕುರಿತ ಅನೇಕ ಚರ್ಚೆಗಳು ಪ್ರಸ್ತುತದಲ್ಲಿ ನಡೆಯಬೇಕಾದುದು ಜರೂರಿನ ಕಾರ್ಯವೆನಿಸುತ್ತಿದೆ.
ಒಂದು ನಿಗದಿತ ಭೌಗೋಳಿಕ ಪರಿಸರದ ಜನರಿಗೆ ತಮ್ಮನ್ನು ತಾವು ಸಂವಹನಿಸಿಕೊಳ್ಳಲು ಒಂದು ಭಾಷೆ ಅವಶ್ಯಕ. ಏಕೆಂದರೆ ಭಾಷೆಯು ಜನರ ಚೈತನ್ಯವೂ ಹೌದು. ಭಾಷೆಯಿದ್ದಲ್ಲಿ ಸಾಹಿತ್ಯದ ಸೃಷ್ಟಿಯಾಗುತ್ತದೆ. ಚಳವಳಿ ನಿರಂತರವಾಗಿ ನಡೆಯುವ ಒಂದು ಕ್ರಿಯಾತ್ಮಕ ಪ್ರಕ್ರಿಯೆ. ಚಳವಳಿಯೊಂದು ಜೀವಂತಿಕೆ ಪಡೆದುಕೊಳ್ಳಬೇಕಾದರೆ ಸಾಹಿತ್ಯದ ಚಟುವಟಿಕೆಗಳು ಪ್ರೇರಣೆಯಾಗುತ್ತವೆ. ಏಕೀಕರಣ ಚಳವಳಿ ಚರಿತ್ರೆಯನ್ನು ಸೃಷ್ಟಿ ಮಾಡಬೇಕಾದರೆ, ಅದಕ್ಕೆ ನೀರೇರೆದು ಪೋಷಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಸಾಹಿತ್ಯ ಮತ್ತು ಚರಿತ್ರೆ ಎರಡೂ ಜ್ಞಾನಶಾಖೆಗಳು ಮಾನವ ಮತ್ತು ಸಮಾಜವನ್ನು ಮೂಲಕೇಂದ್ರವನ್ನಾಗಿ ಇಟ್ಟುಕೊಂಡಿವೆ. ಈ ನೋಟದಲ್ಲಿ ಇವೆರಡು
ಒಂದೇ. ಆದರೆ ವಿಶ್ಲೇಷಣೆಯ ಕ್ರಮದಲ್ಲಿ ಭಿನ್ನತೆಗಳಿವೆ. ಚರಿತ್ರೆ ಮಾನವನ ಜೀವನವನ್ನು ದಾಖಲು ಮಾಡುತ್ತಾ ಹೋದರೆ ಸಾಹಿತ್ಯ ಅದನ್ನು ಪ್ರತಿಬಿಂಬಿಸುತ್ತಾ ಹೋಗುವಂಥದ್ದು. “ಏಕೀಕರಣ ಚಳವಳಿ ಮತ್ತು ಸಾಹಿತ್ಯ” ಎಂಬ ಶೀರ್ಷಿಕೆಯೇ ಹೇಳುವಂತೆ ಇದೊಂದು ಅಂತರಶಿಸ್ತೀಯ ಅಧ್ಯಯನ. ಇಲ್ಲಿ ಚಾರಿತ್ರಿಕ ಘಟನೆಯೊಂದಕ್ಕೆ ಸಾಹಿತ್ಯಿಕ ಪ್ರಕ್ರಿಯೆ ಯಾವ ರೀತಿಯಲ್ಲಿ ಇತ್ತು ಎಂಬುದು ಮುಖ್ಯ. ಅಲ್ಲದೆ ಸಾಹಿತ್ಯಿಕ ಪ್ರಕ್ರಿಯೆಗಳು ಸಮಕಾಲೀನ ಸಂದರ್ಭದ ಆಗುಹೋಗುಗಳಿಗೆ ಹೇಗೆ ಚಾಲನೆ ನೀಡುತ್ತಿವೆ ಎಂಬುದನ್ನು ಇಲ್ಲಿ ಚರ್ಚಿಸಬೇಕಾಗುತ್ತದೆ.
ಭಾರತೀಯ ಪರಂಪರೆಯೊಳಗೆ ‘ರಾಷ್ಟ್ರೀಯತೆ’ ಮತ್ತು ಏಕೀಕರಣ’ದ ಪರಿಕಲ್ಪನೆಗಳನ್ನು ಅರ್ಥೈಸುವುದಾದರೆ ಹೆಚ್ಚಿನ
ವ್ಯತ್ಯಾಸಗಳನ್ನು ಕಾಣಲಾಗದು. ವಸಾಹತುಶಾಹಿಗಳ ಆಳ್ವಿಕೆಗೆ ಒಳಪಟ್ಟಿದ್ದ ಅಂದಿನ ಭಾರತದ ಸ್ಥಿತಿಗತಿಗಳಿಗೂ, ಛಿದ್ರವಾಗಿದ್ದ ಕನ್ನಡ ಭೂ ಪರಿಸರಕ್ಕೂ ಹೆಚ್ಚಿನ
ಭಿನ್ನತೆಗಳು ಕಂಡುಬರುವುದಿಲ್ಲ.
“ ‘ರಾಷ್ಟ್ರೀಯತೆ’ ಎಂಬುದು ನಿರ್ದಿಷ್ಟ ಜನಾಂಗೀಯ ಗುಂಪುಗಳು (Ethnic Groups) ಭಾಷಿಕರು ಕಂಡುಕೊಳ್ಳುವ ‘ಸ್ವಪ್ರಜ್ಞೆ’ (Self Consciousness)ಯ ಅರಿವು ಆಗಿರುತ್ತದೆ.
ಈ ಅರಿವಿನ ಅಥವಾ ಪರಿಕಲ್ಪನೆಯ ಪರಿಧಿಗಳಲ್ಲಿ ಹುಟ್ಟಿಕೊಂಡದ್ದೇ ಏಕೀಕರಣ. ಆದರೆ ಏಕೀಕರಣ ಪರಿಕಲ್ಪನೆಯು ಅನನ್ಯತೆಗೆ ಬಂದದ್ದು ಆಯಾ ಪ್ರಾಂತೀಯ ಮಟ್ಟಗಳಲ್ಲಿಯೇ. ಅಂಥವುಗಳಲ್ಲಿ ಪ್ರಾಂತ್ಯಾಭಿಮಾನ, ಸ್ವಾಭಿಮಾನ, ಸ್ವ-ಭಾಷೆ, ಸ್ವ-ಸಂಸ್ಕøತಿ, ಸ್ವ-ಆಡಳಿತ, ಸ್ವ-ದೇಶಾಭಿಮಾನ, ಸ್ವಾತಂತ್ರ್ಯಾಭಿಮಾನ, ದೇಶಿತನ (Nativeness) ಮೊದಲಾದ ಪರಿಕಲ್ಪನೆಗಳು ಮುಖ್ಯವಾದವು. ಉದಾಹರಣೆಗೆ ಭಾರತದ ಸಂದರ್ಭದಲ್ಲಿ ಬಂಗಾಳ, ಬಿಹಾರ, ಒರಿಸ್ಸಾ, ಸಿಂಧ್, ಗುಜರಾತ್, ಮಹಾರಾಷ್ಟ್ರ, ಆಂದ್ರ ಕರ್ನಾಟಕ, ಕೇರಳ, ತಮಿಳುನಾಡು ಮೊದಲಾದ ಭೂ ನೆಲೆಗಳಲ್ಲಿ ಅಭಿವ್ಯಕ್ತಗೊಂಡವು.” (ಅಡಿಟಿಪ್ಪಣಿ:1, ಗೋವಿಂದರಾಜು.ಸಿ.ಆರ್., 1998, ‘ಕರ್ನಾಟಕ
ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯ’, ಎಸ್.ಬಿ.ಎಸ್. ಪಬ್ಲಿಷರ್ಸ್
ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು, ಪು.ಸಂ.-42) ಈ
ರೀತಿಯ ಭಾಷಿಕ ಚಳವಳಿಗೆ ಒಂದು ಸಂಘಟಿತ ರೂಪವನ್ನು ಕೊಟ್ಟವರ ಪೈಕಿ ಒರಿಯಾಗಳೇ ಮೊದಲಿಗರು. ಭಾಷೆಯನ್ನು ಮೂಲ ಆಧಾರವನ್ನಾಗಿ ಇಟ್ಟುಕೊಂಡು ಭಾರತವನ್ನು ವಿಭಜಿಸಬೇಕು ಎಂಬ ಬೇಡಿಕೆಯನ್ನು ವ್ಯಕ್ತಪಡಿಸಿದ ಬ್ರಿಟಿಷ್ ಆಳರಸರಲ್ಲಿ ಜ್ಹಾನ್ ಬ್ರೈಟ್ ಮೊದಲಿಗ (1958ರಲ್ಲಿ).
ಜನಪದರ ಮೌಖಿಕ ಪರಂಪರೆಯ ಮೂಲಕ ಭಾಷೆಯೊಂದರ ಸಾಹಿತ್ಯವು ಸೃಷ್ಟಿಗೊಂಡು ಹಲವು ಜನಪದ ಕಥೆ, ಗೀತೆ, ಮಹಾಕಾವ್ಯಗಳು ಮುಂತಾದವು ರೂಪುಗೊಂಡವು. ಹೀಗೆ ರೂಪುಗೊಂಡ ಜನಪದ ಸಾಹಿತ್ಯಗಳು ರಚನೆಗೊಂಡ ಪ್ರದೇಶವೊಂದರ ಭೌಗೋಳಿಕ ವ್ಯಾಪ್ತಿಯನ್ನು ಅಲ್ಲಿನ ಭಾಷೆಯ ಮೂಲಕ ಕಟ್ಟಿಕೊಡುತ್ತವೆ. ಹೀಗೆ ಮುಂದುವರಿದು ಲಿಖಿತ ಸಾಹಿತ್ಯ ರೂಪುಗೊಂಡವು. 9ನೇ ಶತಮಾನದ ಆದಿಯಲ್ಲಿ
ರಚನೆಯಾದ ಕವಿರಾಜಮಾರ್ಗದಲ್ಲಿ ‘ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದ’ ಎಂಬ ಹೇಳಿಕೆ ಕನ್ನಡನಾಡಿನ ಮೇರೆಗಳನ್ನು ಗುರ್ತಿಸುತ್ತದೆ ಹಾಗೂ ಕನ್ನಡ ನಾಡಿನ ವಿಸ್ತಾರತೆಯನ್ನು ತಿಳಿಸುತ್ತದೆ. ತಮಿಳಿನ ‘ಶಿಲಪ್ಪದಿಗಾರಂ’ ಕೃತಿಯಲ್ಲಿ ಬರುವ ‘ಕರ್ನಾಟ’ ಹಾಗೂ ಅಶೋಕನ ಶಾಸನದಲ್ಲಿ ಬರುವ ‘ಇಸಿಲ’ ಎಂಬ ಪದಗಳು ಕರ್ನಾಟಕ ಹಾಗೂ ಕನ್ನಡ ಭಾಷೆಯ ಪ್ರಾಚೀನತೆಯನ್ನು ತಿಳಿಸುತ್ತದೆ.
ಶಾತವಾಹನರು, ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು, ಹೊಯ್ಸಳರು, ಬಹಮನಿ ಸುಲ್ತಾನರು ಮುಂತಾದವರ ಆಳ್ವಿಕೆಗೆ ಒಳಪಟ್ಟಿತ್ತು. ಭಾರತದ ದಕ್ಷಿಣ ಭಾಗದಲ್ಲಿ ವಿಶಾಲವಾಗಿದ್ದ ಕನ್ನಡನಾಡು 1) ಮುಂಬಯಿ ಕರ್ನಾಟಕ, 2) ಮದರಾಸು ಕರ್ನಾಟಕ, 3) ಕಂಟೋನ್ಮೆಂಟ್ ಕರ್ನಾಟಕ (ಬೆಳಗಾವಿ, ಬೆಂಗಳೂರು, ಬಳ್ಳಾರಿ), 4) ಕೊಡಗು ಕರ್ನಾಟಕ, 5) ಹೈದರಾಬಾದ್ ಕರ್ನಾಟಕ, 6) ಹೈದರಾಬಾದ್ ಕರ್ನಾಟಕದ ಜಹಗೀರು (ಕೊಪ್ಪಳ, ಗದ್ವಾಲ), 7) ಮೈಸೂರು ಸಂಸ್ಥಾನ, 8) ಕೊಲ್ಹಾಪುರ ಸಂಸ್ಥಾನ (ಕೆಲವು ಭಾಗ ಮಾತ್ರ ಕನ್ನಡ), 9) ಕೊಲ್ಹಾಪುರ ಸಂಸ್ಥಾನ ಜಹಗೀರುಗಳು, 10) ಸಾಂಗಲಿ (ಬಹುಭಾಗ ಕನ್ನಡ), 11) ಔಂಧ (ಕೆಲವು ಭಾಗ ಕನ್ನಡ), 12) ಮೀರಜ್ (ಹಿರಿ), 13) ಮೀರಜ್ (ಕಿರಿ), 14) ಕುರಂದವಾಡ (ಹಿರಿ), 15) ಕುರಂದವಾಡ (ಕಿರಿ), 16) ಜಮಖಂಡಿ, 17) ಮುಧೋಳ, 18) ರಾಮದುರ್ಗ, 19) ಅಕ್ಕಲಕೋಟೆ, 20) ಜತ್ತ, 21) ಸವಣೂರು, 22) ಸೊಂಡೂರು ಈ 22 ಪ್ರಾಂತ್ಯಗಳಲ್ಲಿ ಹಂಚಿಹೋಗಿತ್ತು. ಈ ಹದಗೆಟ್ಟ ಪರಿಸ್ಥಿತಿಯನ್ನು
ಬದಲಿಸಿ ಕನ್ನಡ ಭಾಷಿಗರೆಲ್ಲರೂ ಒಂದೆಡೆ ಸೇರಿ ರಾಜಕೀಯವಾಗಿ ಒಂದೇ ಪ್ರಾಂತಿಕ ಆಡಳಿತಕ್ಕೆ ಒಳಪಡುವಂತೆ ಕರ್ನಾಟಕವನ್ನು ಸಂಯೋಜಿಸುವುದು ಏಕೀಕರಣ ಚಳುವಳಿಯ ಉದ್ದೇಶವಾಗಿತ್ತು. ಈ ಏಕೀಕರಣ ಚಳವಳಿಗೆ
ರಾಜಕೀಯ ನೇತಾರರಷ್ಟೇ ಸಾಹಿತ್ಯ ಕ್ಷೇತ್ರದ ಹಲವರ ಶ್ರಮದ ಬೆವರು ಹರಿದಿದೆ.
20-07-1890ರಲ್ಲಿ ರಾ.ಹ.ದೇಶಪಾಂಡೆ
ಮತ್ತು ಸಂಗಡಿಗÀರಿಂದ ವಿದ್ಯಾವರ್ಧಕ ಸಂಘ ಆರಂಭವಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರಿಂದ 1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಯಿತು. ಆಲೂರು ವೆಂಕಟರಾಯರಂಥ ಉತ್ಸಾಹಿಗಳು ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಮೊದಲ ಹೆಜ್ಜೆಯಾಗಿ 1907 ಮತ್ತು 1908ರಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ಥರ ವಾರ್ಷಿಕ ಸಮ್ಮೇಳನಗಳನ್ನು ಧಾರವಾಡದಲ್ಲಿ ನಡೆಸಿದರು. ಹಾಗೆಯೇ ಮುಂಬೈ ಕರ್ನಾಟಕದವರ ಸಮ್ಮೇಳನವನ್ನು ಮೈಸೂರು ಪ್ರಾಂತದಲ್ಲಿ ನಡೆಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ. 1924ರಲ್ಲಿ ಮಹಾತ್ಮಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೇಸ್ ಸಮ್ಮೇಳನದಲ್ಲಿ ಹುಯಿಲಗೋಳ ನಾರಾಯಣರಾಯರು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹಾಡನ್ನು ಬರೆದು ರಾಗ ಸಂಯೋಜಿಸಿ ಮೊಟ್ಟಮೊದಲಿಗೆ ಹಾಡುವ ಮೂಲಕ ಏಕೀಕರಣದ ಮಂತ್ರ ಹಾಡಿದರು.
19ನೇ ಶತಮಾನದ ಕೊನೆಯ
ಹಾಗೂ 20ನೇ ಆರಂಭದ ದಶಕಗಳಲ್ಲ್ಲಿ
ಸಾಹಿತ್ಯ ಕ್ಷೇತ್ರವು ಏಕೀಕರಣ ಚಳವಳಿಗೆ ಮಹತ್ವದ ಕೊಡುಗೆ ನೀಡಿತು. ತಿಪ್ಪಯ್ಯ ಮಾಸ್ತರ ಬೆಟಗೇರಿ ಕೃಷ್ಣಶರ್ಮ, ಬೇಂದ್ರೆ, ಶಿವರಾಮ ಕಾರಂತ, ಎಸ್.ಎನ್. ಹೊಳ್ಳ, ಸಕ್ಕರಿ ಬಾಳಾಚಾರ್ಯ, ಬಾಲಚಂದ್ರ ಘಾಣೇಕರ, ರಾಜರತ್ನಂ, ಶ್ರೀಧರ ಖಾನೋಲಕರ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ದಿನಕರ ದೇಸಾಯಿ, ತಿರುಮಲೆ ರಾಜಮ್ಮ, ಹರ್ಡೇಕರ ಮಂಜಪ್ಪ, ಬುರ್ಲಿ ಬಿಂದುಮಾಧವ ಮುಂತಾದವರು ಕವಿತೆ, ಲೇಖನ, ಪುಸ್ತಕಗಳನ್ನು ಬರೆದು ಚಳುವಳಿಗೆ ಪ್ರೇರಣೆ ನೀಡಿದರು. 1917ರಲ್ಲಿ ಆಲೂರು ವೆಂಕಟರಾಯರು “ಕರ್ನಾಟಕ ಗತವೈಭವ” ಕೃತಿಯನ್ನು ಬರೆದು ಕರ್ನಾಟಕದ ವೈಭವಯುತ ಚರಿತ್ರೆಯನ್ನು ಬಿಚ್ಚಿಟ್ಟರು. ಡಾ. ಜಾನ್ಪ್ಲೀಟರ ‘ದಿ ಡಿನ್ಯಾಸ್ಟೀಸ್ ಆಫ್
ಕ್ಯಾನರೀಸ್ ಡಿಸ್ಟ್ರೀಕ್ಟ್ಸ್ ಆಫ್ ಬಾಂಬೆ ಪ್ರೆಸಿಡೆನ್ಸಿ’ (1896), ಬಿ.ಎಲ್.ರೈಸ್
ಅವರ ‘ಎಪ್ರಿಗ್ರಾಪಿಯಾ ಕರ್ನಾಟಿಕಾ ಸಂಪುಟಗಳು’ (1886), ಡಾ. ಭಂಡಾಕರ್ ಅವರ ‘ದಿ ಅರ್ಲಿ ಹಿಸ್ಟರಿ
ಆಫ್ ದಖ್ಖನ್’ (1884) ಎಂಬ ವಿದೇಶಿಯರ ಐತಿಹಾಸಿಕ ಗ್ರಂಥಗಳು ಕರ್ನಾಟಕದ ಚರಿತ್ರೆಯನ್ನು ಕಟ್ಟಿಕೊಟ್ಟವು. ಕುವೆಂಪು ಅವರು “ಜೈ ಭಾರತ ತನುಜಾತೆ
ಜಯಹೇ ಕರ್ನಾಟಕ ಮಾತೆ”, ಎಂಬ ಕವನಗಳ ಸಾಲುಗಳ ಮೂಲಕ ಭಾರತಾಂಬೆಯ ಮಗಳು ಕನ್ನಡಾಂಬೆಗೆ ಜೈಕಾರವನ್ನು ಕೂಗಿದರು. “ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ಕನ್ನಡವಾಗಿರು” ಎಂದು ಕರೆ ನೀಡಿದ ಕುವೆಂಪು, “ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ
ಶಿವ!” ಎಂದು ಮೊರೆಯಿಟ್ಟರು. “ನಾವೆಲ್ಲ ಒಂದೆ ಮನೆಯವರಣ್ಣತಮ್ಮದಿರು, ನಮ್ಮೆಲ್ಲರನು ಪಡೆದುದೊಂದೆ ನಾಡಿನ ಬಸಿರು, ಎಂದು ನಾವರಿದೆವೇ ನಮಗೆ ಇನ್ನಾರೆದುರು ! ಹಾ ನನ್ನ ಸೋದರರೇ
ಬನ್ನಿ ಒಂದಾಗಿ, ಜಯವಧುವ ನಿಮ್ಮ ತೋಳಿನೊಳಿಟ್ಟು ತೂಗಿ” ಎಂದು ಮಾಸ್ತಿಯವರು ಹಂಬಲಿಸಿದರು. ಒಕ್ಕೂರಲಿನಿಂದೆಲ್ಲರೂ ಕೂಗಿ ಈ ಒಕ್ಕೂಗ - ಈ
ಹಿರಿಯ ಕೂಗ - ಸಿರಿಗನ್ನಡಂ ಗೆಲ್ಗೆ, ಹಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಗೆಲ್ಗೆ, ಬಾಳ್ಗೆ - ಕನ್ನಡದ ತಾಯ್ ಗೆಲ್ಗೆ, ಬಾಳ್ಗೆ - ಎಂದು ಬಿ.ಎಂ.ಶ್ರೀ.
ಹಾರೈಸಿದರು. ಅಲ್ಲದೇ ಬ್ರಿಟಿಷ್ ಅಧಿಕಾರಿಗಳಾದ ಸರ್ ವಾಲ್ಟರ್, ಸರ್ ಥಾಮಸ್ ಮನ್ರೋ, ಜಾನ್ ಎ.ಡನ್ಲಪ್,
ಗ್ರೀನ್ಹಿಲ್, ಆರ್.ಗ್ರಾಂಟ್, ಡಬ್ಲ್ಯೂ ಎ ರಸೆಲ್ ಇವರುಗಳು
ಸಹ ಕನ್ನಡ ಪರವಾದ ಹೋರಾಟಗಳಲ್ಲಿ ಭಾಗಿಗಳಾಗಿರುವುದನ್ನು ಕನ್ನಡ ಏಕೀಕರಣ ಚಳವಳಿಯಲ್ಲಿ ಪ್ರಮುಖವಾಗಿ ಕಾಣಬಹುದು.
ಪತ್ರಿಕೆ ರಂಗದ ಸಾಹಿತ್ಯ ನೀಡಿದ ಕೊಡುಗೆಯಂತೂ ಅಪಾರವಾದುದು. 1843ರಲ್ಲಿ ಮೊಗ್ಲಿಂಗ್ರ ಕ್ರೈಸ್ತ ಮಿಷನರಿ
ಆರಂಭಿಸಿದ ‘ಮಂಗಳೂರು ಸಮಾಚಾರ’ ಎಂಬ ಪತ್ರಿಕೆಯು ಕನ್ನಡದ ಮೊದಲ ಪತ್ರಿಕೆಯಾಯಿತು. ವಿದ್ಯಾವರ್ಧಕ ಸಂಘದ ಮುಖವಾಣಿ ಮಾಸಿಕ ಪತ್ರಿಕೆ ‘ವಾಗ್ಭೂಷಣ’ 1896ರಲ್ಲಿ ಆರಂಭಗೊಂಡಿತು. ಆ ನಂತರದಲ್ಲಿ ಎಂ.ವೆಂಕಟಕೃಷ್ಣಯ್ಯ (ವೃತ್ತಾಂತ ಚಿಂತಾಮಣಿ-1885, ಮೈಸೂರು), ಮುದವೀಡು ಕೃಷ್ಣರಾವ್ (ಕರ್ನಾಟಕ ವೃತ್ತ-1890), ರಂಗನಾಥ ದಿವಾಕರ (ಕರ್ಮವೀರ), ಎಚ್.ಕೆ. ವೀರಣ್ಣಗೌಡ (ಚಿತ್ರಗುಪ್ತ), ಬಿ.ಎನ್.ಗುಪ್ತ
(ಪ್ರಜಾಮತ), ಅಗರಂ ರಂಗಯ್ಯ (ಸಾಧ್ವಿ), ಪಿ.ಆರ್.ರಾಮಯ್ಯ
(ತಾಯಿನಾಡು), ಮೊಹರೆ (ಕರ್ನಾಟಕ ವೈಭವ, ಸಂಯುಕ್ತ ಕರ್ನಾಟಕ-1929), ಎಲ್.ಎಸ್. ಪಾಟೀಲ್ (ತರುಣ ಕರ್ನಾಟಕ), ಶ್ರೀನಿವಾಸರಾವ್ ಮಂಗಳವೇಡೆ (ಕನ್ನಡಿಗ), ರಾಮರಾಯ ಮಲ್ಯ (ಸತ್ಯಾಗ್ರಹಿ), ಎ.ಬಿ.ಶೆಟ್ಟಿ
(ನವಯುಗ), ಟಿ.ಬಿ.ಕೇಶವರಾವ್
(ಕರ್ನಾಟಕ ಕೇಸರಿ, ನವಭಾರತ), ವಿ.ಬಿ.ಪುರಾಣಿಕ
(ಲೋಕಮತ), ಪಿ. ಬೆಳ್ಳಿಯಪ್ಪ (ಕೊಡಗು), ನರಸಿಂಹ ಶಾನುಭೋಗ (ಕಾನಡಾ ವೃತ್ತ), ಗಣೇಶ ಯಾಜಿ (ಕಾನಡಾ ಧುರೀಣ), ಡಿ.ಕೆ. ಭಾರದ್ವಾಜ
(ತಿಲಕ ಸಂದೇಶ), ತಿ.ತಾ.ಶರ್ಮ
(ವಿಶ್ವಕರ್ನಾಟಕ), ಸೀತಾರಾಮಶಾಸ್ತ್ರೀ (ವೀರಕೇಸರಿ), ಗೋಪಾಲ ದೇಶಪಾಂಡೆ (ಸಂದೇಶ). ಹೀಗೆ, ಇನ್ನೂ ಅನೇಕ ಪತ್ರಿಕೆಗಳು ರಾಷ್ಟ್ರೀಯತೆ ಮತ್ತು ಏಕೀಕರಣದ ಕುರಿತಾದ ಅನೇಕ ಲೇಖನಗಳನ್ನು ಬರೆದವು. ಅಪಾರ ಕಷ್ಟನಷ್ಟವನ್ನು ಅನುಭವಿಸಿದರೂ ಸಹಿಸಿಕೊಂಡು ಪತ್ರಿಕೆಗಳನ್ನು ನಡೆಸಿ ಪ್ರಚಾರ ಮಾಡಿ ಚಳವಳಿಗೆ ಬೆಂಬಲ ನೀಡಿದವು. ಪ್ರಸ್ತುತದಲ್ಲಿ ಚಂಪಾ ಅವರ ಸಂಪಾದಕತ್ವದ ‘ಸಂಕ್ರಾಂತಿ’ ಪತ್ರಿಕೆಯು ನಾಡು-ನುಡಿ, ನೆಲ-ಜಲದ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿದೆ. ಪ್ರಜಾಮತ, ಸುಧಾ, ತರಂಗ, ವಾರಪತ್ರಿಕೆ ಮುಂತಾದ ಸಾಪ್ತಾಹಿಕಗಳು, ಕಸ್ತೂರಿ, ಮಲ್ಲಿಗೆ, ಮಯೂರ, ತುಷಾರ, ಉತ್ಥಾನ ಮುಂತಾದ ಮಾಸಿಕ ಪತ್ರಿಕೆಗಳು ಪ್ರಸ್ತುತದ ಸಮಕಾಲೀನ ಕನ್ನಡದ ಹೋರಾಟಗಳಿಗೆ ವೇದಿಕೆಯಾಗಿವೆ. ಮೊಹರೆ ಹನುಮಂತರಾವ್, ಡಿ.ವಿ.ಜಿ.,
ಪಾಟೀಲ ಪುಟ್ಟಪ್ಪ, ಎನ್.ಎಸ್. ಸೀತರಾಮಶಾಸ್ತ್ರೀ, ಖಾದ್ರಿ ಶಾಮಣ್ಣ ಗಣ್ಯ ಪತ್ರಕರ್ತರು.
ಪ್ರಪಂಚದಲ್ಲಿ ಭಾಷೆಗಾಗಿ ಸ್ಥಾಪನೆಯಾಗಿರುವ ಮೊದಲ ವಿಶ್ವವಿದ್ಯಾಲಯ ಎಂಬ ಹೆಮ್ಮೆಯನ್ನು ಹೊಂದಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಸದಾ ಕ್ರಿಯಾಶೀಲವಾಗಿದ್ದು ನಾಡು-ನುಡಿ, ನೆಲ-ಜಲದ ವಿಚಾರಗಳಿಗೆ ತಳಸ್ಪರ್ಶಿಯಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದು, ಹಲವು ಯೋಜನೆಗಳನ್ನು ರೂಪಿಸುತ್ತ ಸಮಕಾಲೀನ ಸಮಸ್ಯೆಗಳಿಗೆ ಸಂಶೋಧನೆಗಳ ಮೂಲಕ ಪರಿಹಾರಗಳನ್ನು ಹುಡುಕುವ ಹಾಗೂ ಹೋರಾಟಗಳ ಮೂಲಕ ಸರ್ಕಾರಗಳಿಗೆ ಒತ್ತಡಗಳನ್ನು ತರುವ ಕೆಲಸಗಳನ್ನು ಮಾಡುತ್ತ ಕನ್ನಡನಾಡಿನ ಕಾವಲುಗಾರನಾಗಿ ನಾಡು-ನುಡಿ ರಕ್ಷಣೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ಗೀರೀಶ್ ಕರ್ನಾಡ್, ಚಂದ್ರಶೇಖರ ಕಂಬಾರ, ಸಿದ್ದಲಿಂಗಯ್ಯ, ಚಂದ್ರಶೇಖರ ಪಾಟೀಲ, ಬಂಜಗೆರೆ ಜಯಪ್ರಕಾಶ್, ಅರವಿಂದ ಮಾಲಗತ್ತಿ, ನಟರಾಜ್ ಹುಳಿಯಾರ್, ಕಾಳೇಗೌಡ ನಾಗವಾರ ಮುಂತಾದವರು ತಮ್ಮ ಸಾಹಿತ್ಯಗಳಿಂದ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಯೋಜನೆಗಳ ಮೂಲಕ ಅಖಂಡ ಕರ್ನಾಟಕದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಯಾವುದೇ ಸನ್ಮಾನ ಅಥವಾ ಹುದ್ದೆಗಳಿಗೆ ಆಸೆ ಪಡದೇ ನಾಡಿನ ಹಿತಚಿಂತನೆಯನ್ನು ಬಯಸುವ ದೇವನೂರ ಮಹಾದೇವ ಅವರು ಶಿಕ್ಷಣದಲ್ಲಿ ಆಂಗ್ಲ ಭಾಷಾ ಮಾಧ್ಯಮವನ್ನು ವಿರೋಧಿಸಿ ಮಾತೃ ಭಾಷೆಯಲ್ಲಿ ಸಮಾನ ಶಿಕ್ಷಣವನ್ನು ನೀಡುವಂತೆ ಹೋರಾಟ ಮಾಡುತ್ತಿದ್ದಾರೆ. ಶ್ರಮ ಸಂಸ್ಕøತಿಯನ್ನು ಮೈಗತ್ತಿಸಿಕೊಂಡು ಸದಾ ಬಂಡಾಯ ಬಾವುಟವನ್ನು ಹಾರಿಸುತ್ತ ಬಂಡಾಯ ಸಾಹಿತ್ಯಕ್ಕೆ ನಾಂದಿ ಹಾಡಿದ ಬರಗೂರು ರಾಮಚಂದ್ರಪ್ಪ ಅವರು ಶ್ರಮಿಕ ವರ್ಗಗಳನ್ನು ಒಟ್ಟುಗೂಡಿಸುತ್ತ ತಳಮಟ್ಟದಿಂದ ಅಂದರೆ ನಾಡಿನ ಮೂಲನಿವಾಸಿಗಳನ್ನು ಎಚ್ಚರಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಇವರು ರೂಪಿಸಿದ ‘ಉಪಸಂಸ್ಕøತಿ ಮಾಲೆ’ ಯೋಜನೆಯು
ಪ್ರಮುಖವಾಗಿ ಕರ್ನಾಟಕದಲ್ಲಿನ ಹಲವಾರು ಬುಡಕಟ್ಟು ಸಮುದಾಯಗಳನ್ನು ಅಧ್ಯಯನ ಮಾಡಿ ಹಲವು ಸಂಪುಟಗಳಲ್ಲಿ ದಾಖಲಿಸಿ ನಾಡುನುಡಿಯನ್ನು ಬೇರುಮಟ್ಟದಲ್ಲಿ ಕಟ್ಟುವ ಕೆಲಸ ಮಾಡಿದರು. ಗಡಿನಾಡು ಆಯೋಗದ ಅಧ್ಯಕ್ಷತೆಯನ್ನು ವಹಿಸಿ ಗಡಿಪ್ರದೇಶಗಳ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಿದರು. ಅಷ್ಟೆ ಅಲ್ಲದೆ ಸಿನಿಮಾ ಕ್ಷೇತ್ರದ ಮೂಲಕವು ಸಹ ಕನ್ನಡ ನಾಡಿನ
ಸಮಸ್ಯೆಗಳನ್ನು ತೆರೆದಿಡುತ್ತ ಅವುಗಳಿಗೆ ಪ್ರಸ್ತುತದಲ್ಲಿ ಹೇಗೆ ಸ್ಪಂದಿಸಬಹುದು ಎಂಬುದನ್ನು ತಮ್ಮ ಬಂಡಾಯ ಸಾಹಿತ್ಯದ ಮೂಲಕ ಕಟ್ಟಿಕೊಡುತ್ತಿದ್ದಾರೆ. ಮಧ್ಯೆ ಕರ್ನಾಟಕದ ಹುಟ್ಟು ಹೋರಾಟಗಾರರಾದ ಚಂದ್ರಶೇಖರ್ ಪಾಟೀಲ ಅವರು ‘ಕನ್ನಡ ಕನ್ನಡ ಬನ್ನಿ ಸಂಗಡ’ ಎಂಬ ಒಗ್ಗಟ್ಟಿನ ಮಂತ್ರವನ್ನು ಪಠಿಸುತ್ತ ಉತ್ತರ-ದಕ್ಷಿಣಗಳ ಅಸಮತೋಲನವಾದಾಗ ತಮ್ಮ ನೇರನುಡಿಯ ಮೂಲಕ ಪ್ರತಿಭಟಿಸುತ್ತ ಅಖಂಡ ಕರ್ನಾಟಕದ ಅಭಿವೃದ್ಧಿಯನ್ನು ತಮ್ಮ ಸಾಹಿತ್ಯದ ಮೂಲಕ ಮಾಡುತ್ತಿದ್ದಾರೆ. ಇಂದು ಸಾಹಿತ್ಯದ ಮೂಲಕ ಕನ್ನಡ ಕಟ್ಟುವ ಕೆಲಸದಲ್ಲಿ ಅಥವಾ ನಾಡು-ನುಡಿಯನ್ನು ಕಟ್ಟುವ ಕಾರ್ಯದಲ್ಲಿ ಯುವಜನತೆಯು ಸಕ್ರಿಯವಾಗಿಲ್ಲ. ಯುವಜನರು ಇಂದು ತಂತ್ರಜ್ಞಾನದೊಳಗೆ ತಮ್ಮನ್ನು ಮುಳುಗಿಹೋಗಿರುವ ಕಾರಣವೋ ಏನೋ ಕರ್ನಾಟಕದ ನೆಲ-ಜಲ, ನಾಡು-ನುಡಿಯ ಸಮಸ್ಯೆಗಳಿಗೆ ಸ್ಪಂದಿಸದೆ ನವೆಂಬರ್ ತಿಂಗಳ ಕನ್ನಡಿಗರಾಗಿದ್ದಾರೆ ಹಾಗೂ ಜಾತಿಸಂಕೋಲೆಗಳಲ್ಲಿ ಬಂಧಿಯಾಗಿ ರಾಜಕೀರಣಗಳಿಗೆ ರಾಜಕೀಯ ದಾಳಗಳಾಗುತ್ತಿದ್ದಾರೆ. ನಮ್ಮ ಹಿರಿಯರು ಕಟ್ಟಿಕೊಟ್ಟ ‘ಅನೇಕತೆಯಲ್ಲಿ ಏಕತೆ’ ಪರಿಕಲ್ಪನೆಯ ನಾಡು ಇಂದು ಬರಿಯ ಭೂಪಟದ ಮೇಲೆಷ್ಟೆ ಅನ್ನುವಂತಿದೆ. ಆದ್ದರಿಂದ ಆಂತರ್ಯದ ಒಗ್ಗಟ್ಟನ್ನು ಕಟ್ಟಬೇಕಾಗಿರುವುದು ಇಂದು ಅವಶ್ಯಕವಾಗಿದ್ದು, ಈ ರೀತಿಯ ಕೆಲಸ
ಸಾಧ್ಯವಾಗುವಂಥದ್ದು ಸಾಹಿತ್ಯದಿಂದ ಮಾತ್ರ.
ಡಾ.ಸಿ.ಆರ್.
ಗೋವಿಂದರಾಜು ಅಭಿಪ್ರಾಯ ಪಡುವಂತೆ ‘ಇಲ್ಲಿ ಬೇಕಿರುವುದು ಸಾಮರಸ್ಯದ ಚಿಂತನೆ, ಉದ್ವೇಗವಲ್ಲದ ಸಮಚಿತ್ತ. ಕನ್ನಡ ಸಾಹಿತ್ಯವು ಅದನ್ನು ಆಗು ಮಾಡಿ ತೋರಿಸಿದೆ. ಆದಾಗ್ಯೂ ಇಂದಿಗೂ ಸಹ ಈ ಸಮಚಿತ್ತದ
ಭಾವನಾತ್ಮಕ ಏಕೀಕರಣಕ್ಕೆ 1) ಏಕೀಕರಣೋತ್ತರ ಜಾತಿ ರಾಜಕಾರಣದ ಹೊಸ ಆಯಾಮಗಳು, 2) ಕೋಮ ರಾಜಕಾರಣ, 3) ಪ್ರಾದೇಶಿಕ ಅಸಮಾನತೆ, 4) ಕಾರ್ಪೋರೇಟ್ ಸಂಸ್ಕøತಿ ಮತ್ತು ಜಾಗತೀಕರಣ,
5) ಏಕಭಾಷಾ ಸಂಸ್ಕøತಿ ದಬ್ಬಾಳಿಕೆ, ಬಹುರಾಷ್ಟ್ರೀಯತೆ,
ಬಹುಸಂಸ್ಕøತಿ, ಅಲ್ಪ ಸಂಖ್ಯಾತ ಭಾಷೆಗಳಿಗೆ ಪ್ರೋತ್ಸಾಹ ಇವುಗಳು ಅಡ್ಡಿಯಾಗಿರುವ ಸಂಗತಿಗಳಾಗಿವೆ. ಇವುಗಳಲ್ಲದೇ ಅಭಿವೃದ್ಧಿ, ಉದ್ಯೋಗಗಳು, ಉತ್ಪಾದನೆ, ವರಮಾನ ಮುಂತಾದವು ಪ್ರಧಾನ ಸಂಗತಿಗಳಾಗಿ ಪರಿಣಮಿಸಿ ಏಕೀಕರಣ ಚಳವಳಿಯ ಅಖಂಡತೆಯ ತತ್ವಕ್ಕೆ ಧಕ್ಕೆಯನ್ನು ಉಂಟುಮಾಡುತ್ತಿವೆ. ಹೀಗೆ ರಾಜ್ಯೋದಯ ಕೇವಲ ಬಾಹ್ಯವಾಗಿತ್ತೆ ಹೊರತು ಆಂತರಿಕ (ಮಾನಸಿಕ)ವಾಗಿ ಆಗಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಜಿ.ಎಸ್.ಶಿವರುದ್ರಪ್ಪನವರು
“ಕನ್ನಡ ನೆಲದೊಳಗಿನ್ನು ಕನ್ನಡಕ್ಕೆ ಹೋರಾಡುವ ಕಾಲವು, ಮುಗಿದಿಲ್ಲೆಂದರೆ ಅದು ನಮಗೇ ಅವಮಾನ, ಕನ್ನಡ ರಾಜ್ಯೋದಯವಾಗಿದೆ ಎಂದರೆ ಅದು ನಿಮಗೆ ಅವಮಾನ, ನಿಜ; ಕನ್ನಡ ರಾಜ್ಯೋದಯವಾಗಿದೆ ಹೊರಗೆ, ಇನ್ನು ಕನ್ನಡ ರಾಜ್ಯೋದಯವಾಗುವುದಿದೆ, ನಮಗೂ ನಿಮಗೂ ಒಳಗೆ”, ಎಂದು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಾರೆ ‘ಏಕೀಕರಣ’ ಪರಿಕಲ್ಪನೆಯ ಹುಟ್ಟು ಮತ್ತು ಬೆಳವಣಿಗೆ, ರಾಜಕೀಯ ಹಾಗೂ ಸಾಂಸ್ಕøತಿಕ ಹಿನ್ನೆಲೆಗಳಲ್ಲಿ ಭಾಷಿಕ ಮಾಧ್ಯಮದ ಮೂಲಕ ಅಂದರೆ ಸಾಹಿತ್ಯದ ಮೂಲಕ ಗುರುತಿಸಿಕೊಂಡ ಸಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ.
ಪರಾಮರ್ಶನ
ಗ್ರಂಥಗಳು
1)
ಅ.ನ.ಕೃ., 1946, ‘ಕನ್ನಡ
ದಾರಿ ಮತ್ತು ಅಖಂಡ ಕರ್ನಾಟಕ’, ಸಾಗರ್ ಪ್ರಕಾಶನ, ಬೆಂಗಳೂರು.
2)
ಕೃಷ್ಣ
ಕೊಲ್ಹಾರ ಕುಲಕರ್ಣಿ, 2006, ‘ಅಖಂಡ ಕರ್ನಾಟಕದ ಹೆಜ್ಜೆಗಳು’, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
3)
ಗೋಪಾಲದಾಸ್.ಎಚ್.ಎಸ್. (ಸಂ), 1996, ‘ಕರ್ನಾಟಕ ಏಕೀಕರಣ ಇತಿಹಾಸ’, ನವಕರ್ನಾಟಕ ಪ್ರಕಾಶನ, ಬೆಂಗಳೂರು.
4)
ಗೋವಿಂದರಾಜು.ಸಿ.ಆರ್., 1998, ‘ಕರ್ನಾಟಕ
ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯ’, ಎಸ್.ಬಿ.ಎಸ್. ಪಬ್ಲಿಷರ್ಸ್
ಡಿಸ್ಟ್ರಿಬ್ಯೂಟರ್ಸ್, ಬೆಂಗಳೂರು.
5)
ಚಂದ್ರಶೇಖರ್.ಎಸ್., ಬಿ.ಸುರೇಂದ್ರರಾವ್ (ಸಂ.),
2016, ‘ಕರ್ನಾಟಕ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು’, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.
6)
ಚನ್ನಬಸಪ್ಪ.ಕೋ., 2007, ‘ಕರ್ನಾಟಕ ಏಕೀಕರಣ’ (ಬಳ್ಳಾರಿ ಜಿಲ್ಲೆ ಹಿನ್ನೆಲೆಯಲ್ಲಿ), ಲೋಹಿಯಾ ಪ್ರಕಾಶನ, ಬಳ್ಳಾರಿ.
7)
ರಾಮು.ಕೆ., 1997, ‘ಕರ್ನಾಟಕ ಏಕೀಕರಣ’, ಚೇತನ್ ಬುಕ್ಹೌಸ್ ಪ್ರಕಾಶನ, ಮೈಸೂರು.
ಆನಂದಕುಮಾರ.ಹೆಚ್.ಎಸ್.
ಪಿಎಚ್.ಡಿ. ಸಂಶೋಧಕ,
ಜಾನಪದ
ಅಧ್ಯಯನ ವಿಭಾಗ
ಕನ್ನಡ
ವಿಶ್ವವಿದ್ಯಾಲಯ,
ಹಂಪಿ
ವಿದ್ಯಾರಣ್ಯ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com
ReplyDelete