ಸೋಲಿಗ ಸಮುದಾಯದ ಪಾರಂಪರಿಕ ಮತ್ತು ಆಧುನಿಕ ಪ್ರವೃತ್ತಿಗಳು

 

ಸೋಲಿಗ ಸಮುದಾಯದ ಪಾರಂಪರಿಕ ಮತ್ತು ಆಧುನಿಕ ಪ್ರವೃತ್ತಿಗಳು

 

- ಡಾ. ಹೆಚ್ ಎಸ್ ಆನಂದಕುಮಾರ

ಚಾಮರಾಜನಗರ

 

ಯಾವುದೇ ಒಂದು ಸಮುದಾಯ ತನ್ನದೇ ಆದ ಒಂದು ಅಸ್ತಿತ್ವವನ್ನು ಪಡೆದುಕೊಂಡು ಇತರೆ ಸಮುದಾಯಗಳಿಗಿಂತ ಭಿನ್ನವಾದ ವಿಶಿಷ್ಟಾಂಶಗಳನ್ನು ಹೊಂದಿರುತ್ತದೆ. ಇದನ್ನೆ ಆಯಾ ಸಮುದಾಯ ಅಥವಾ ಜನಾಂಗದಅನನ್ಯತೆಎಂದು ಹೇಳಬಹುದು. ಹೀಗೆ ತಮ್ಮನ್ನು ತಾವು ಗುರುತಿಸಿಕೊಳ್ಳುವ, ಸ್ವಂತಿಕೆಯನ್ನು ಪ್ರದರ್ಶಿಸುವ, ಮೂಲಕ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ಒಂದು ಪ್ರಕ್ರಿಯೆಯೇಸಾಂಸ್ಕøತಿಕ ಅನನ್ಯತೆ’. ಹೀಗೇ ನಮ್ಮನ್ನು ನಾವು ಅರಿತುಕೊಳ್ಳಲು, ನಮ್ಮ ಸ್ವಂತಿಕೆಯನ್ನು ಗುರುತಿಸಿಕೊಳ್ಳಲು ಜನಸಾಮಾನ್ಯರ ಜೀವನ ನಿರ್ವಹಣೆಯ ಕ್ರಮವನ್ನು ನಿಕಟವಾಗಿ ನೋಡುವ ಪ್ರಯತ್ನ ಜಾನಪದದ್ದಾಗಿದೆ.

 

ಬುಡಕಟ್ಟು ಅರ್ಥ-ವ್ಯಾಖ್ಯಾನ

ಆಧುನಿಕ ಮಾನವನ ಜೀವನಕ್ರಿಯೆ ಜಾನಪದದ ಅಸ್ತಿತ್ವವನ್ನು ಬದಲಾಯಿಸಿದೆ. ಜಗತ್ತಿನಲ್ಲಿ ಜಾಗತೀಕರಣದ ಪರಿಣಾಮವಾಗಿ ಹಲವಾರು ಬದಲಾವಣೆಗಳಾಗಿವೆ. ಕೈಗಾರೀಕರಣದಿಂದಾಗಿ ಇಂದು ಆಧುನಿಕ ತಂತ್ರಜ್ಞಾನಗಳು ಬಹಳಷ್ಟು ಬೆಳೆಯುತ್ತಿದೆ. ಆದರೂ ಸಹ ಭೂಮಿಯ ಮೇಲಿನ ಯಾವ ವಸ್ತುಗಳ ಮೇಲೆಯೂ ಮಾಲೀಕತ್ವವನ್ನು ಹೊಂದದೇ ಇರುವುದು, ಸಮುದಾಯದವರೆಲ್ಲರೂ ತಮ್ಮ ಪುರಾತನರನ್ನು ಪೂಜಿಸುವುದು, ಸಾಮಾಗ್ರಿಗಳನ್ನು ಸಂಗ್ರಹಿಸಿ ಇಡದೇ ಇರುವುದು, ಇದ್ದುದ್ದನ್ನು ಸಮುದಾಯದ ಎಲ್ಲರೂ ಹಂಚಿ ತಿನ್ನುವುದು ಇಂತಹ ಸರ್ವಚೇತನವಾದದ ಗುಣಗಳು, ಪಾರಂಪರಿಕ ಜ್ಞಾನಗಳನ್ನು ಲಕ್ಷಣಗಳನ್ನಾಗಿಯುಳ್ಳ ಬುಡಕಟ್ಟುಗಳು ಆಧುನಿಕತೆಯ ಗಂಟೆ-ಜಾಗಟೆಗಳಿಗೆ ಸಡ್ಡು ಹೊಡೆದು ತನ್ನ ಅಸ್ಮ್ಮಿತೆಯನ್ನು ಕಾಪಾಡಿಕೊಂಡು ಸಾಂಸ್ಕøತಿಕ ಅನನ್ಯತೆಯನ್ನು ಸಾಧಿಸುತ್ತಿವೆ.

ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿದ್ದು ನಿರ್ದಿಷ್ಟ ಭಾಷೆ ಮಾತಾಡುವ ಒಬ್ಬ ಮೂಲ ಪುರುಷ, ಒಂದು ಆದಿದೈವ, ಒಬ್ಬ ಸರ್ವಾನುಮತದ ಮುಖ್ಯಸ್ಥನನ್ನು ಹೊಂದಿರುವ, ಏಕಪ್ರಕಾರವಾದ ನೈಸರ್ಗಿಕ ಕಾಯಿದೆ, ಕಟ್ಟಳೆ ಅನುಸರಿಸುವ ವ್ಯವಸ್ಥೆಯನ್ನು ರೂಢಿಸಿಕೊಂಡಿರುವ ಸಾಮಾಜಿಕ ಗುಂಪು. ಅಂದರೆ ಒಂದು ಸಣ್ಣ, ಸ್ವತಂತ್ರ ಮತ್ತು ಅನ್ಯೋನ್ಯವಾಗಿ ಒಂದುಗೂಡುವ ಜನರ ಸಮೂಹ. ರಕ್ತ ಸಂಬಂಧದ ಎಳೆಯ ಮೂಲಕ ಸಾಮಾಜಿಕ ಮತ್ತು ಸಾಂಸ್ಕøತಿಕ ಅಂಶಗಳಿಂದ ಬಂಧಿತವಾಗಿರುತ್ತದೆ. ಅದರ ರಾಜಕೀಯ ವ್ಯವಸ್ಥೆ ವ್ಯಾಪಕವಾದ ತಳಹದಿಯ ಮೇಲೆ ಪುರಾತನ ಪ್ರಜಾಪ್ರಭುತ್ವ ಕ್ರಮವನ್ನಾಧರಿಸಿದೆ”[1] ಎಂದು ಕ್ರೋಬರ್ ಅಭಿಪ್ರಾಯ ಪಡುತ್ತಾರೆ.

 

ಸೋಲಿಗ ಬುಡಕಟ್ಟು ಸಮುದಾಯ

ಸಾಮಾನ್ಯವಾಗಿ ಬುಡಕಟ್ಟು ಸಮುದಾಯವೆಂದರೆ ಸಮಕಾಲೀನ ಸಮಾಜದ ಮಧ್ಯೆ ಇದ್ದುಕೊಂಡು ಪ್ರತ್ಯೇಕವಾದ ಬದುಕನ್ನು ನಡೆಸುತ್ತ ತಮ್ಮದೇ ಆದ ಸಾಂಸ್ಕøತಿಕ ಮೌಲ್ಯಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿರುವ ಒಂದು ಸಾಮಾಜಿಕ ಗುಂಪು. ದಕ್ಷಿಣ ಕರ್ನಾಟಕ ಭಾಗದಲ್ಲಿ ಕಂಡುಬರುವ ಪ್ರಮುಖ ಬುಡಕಟ್ಟು ಸಮುದಾಯಗಳಲ್ಲಿ ಸೋಲಿಗ ಸಮುದಾಯವು ಒಂದಾಗಿದ್ದು, ಕಾಡನ್ನೇ ನಂಬಿಕೊಂಡು, ಅದನ್ನೇ ಪೂಜಿಸಿಕೊಂಡು ಬದುಕುತ್ತಿದ್ದಾರೆ.

ಸೋಲಿಗ ಬುಡಕಟ್ಟು ಸಮುದಾಯವು ಕರ್ನಾಟಕ ರಾಜ್ಯದ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಅರೆ ಮಲೆನಾಡು ಅರಣ್ಯ ಪ್ರದೇಶಗಳಾದ ನಾಗರಹೊಳೆ, ಬಂಡೀಪುರ, ಬಿಳಿಗಿರಿರಂಗಬೆಟ್ಟ, ಮಲೆ ಮಹದೇಶ್ವರಬೆಟ್ಟ ಹಾಗೂ ತಮಿಳುನಾಡಿನ ಸತ್ಯಮಂಗಲಂ ಭಾಗಗಳಲ್ಲಿ ಕಂಡುಬರುತ್ತಾರೆ. ಇದೇ ಪರಿಸರದಲ್ಲಿ ಬದುಕುವ ಜೇನುಕುರುಬ, ಬೆಟ್ಟ ಕುರುಬ ಮತ್ತು ಯರವರಿಗೆ ಹೋಲಿಸಿದಲ್ಲಿ ಸೋಲಿಗರಿಗೆ ಮುಖ್ಯಪ್ರವಾಹದ ಜೊತೆಗಿನ ಒಡನಾಟ ಹೆಚ್ಚು. ಆದರೆ ಒಡನಾಟ ಸೋಲಿಗರ ಆದಿವಾಸಿತನಕ್ಕೆ ಘಾಸಿ ಮಾಡಿಲ್ಲ.

 

ಅಧ್ಯಯನದ ಉದ್ದೇಶಗಳು

1) ಸೋಲಿಗ ಬುಡಕಟ್ಟು ಸಮುದಾಯದ ಜಾನಪದ ಸಂಸ್ಕøತಿಯು ಚಲನಶೀಲತೆಗೊಂಡು ಅಸ್ಮಿತತೆಯನ್ನು ಸಾಧಿಸಿ ಸಾಂಸ್ಕøತಿಕ ಅನನ್ಯತೆ ಪಡೆದುಕೊಂಡಿರುವುದನ್ನು ದಾಖಲಿಸುವುದು.

2)  ಜಾಗತೀಕರಣ ಸಂದರ್ಭದಲ್ಲಿ ಆಧುನಿಕತೆಯ ಸ್ಪರ್ಶಗಳಿಂದ ಸಂಸ್ಕøತಿಕರಣಗೊಂಡರೂ ತಮ್ಮ ಮೂಲ ಪರಂಪರೆಗಳೊಂದಿಗೆ ದೈನಂದಿನ ಆಚಾರ-ವಿಚಾರ, ಸಂಪ್ರದಾಯ, ಬೇಟೆಗಾರಿಕೆ ತಂತ್ರಗಳು, ವೈದ್ಯಪದ್ಧತಿಗಳನ್ನು ಪೋಷಿಸಿಕೊಂಡು ಬರುತ್ತಿರುವುದನ್ನು ಗುರುತಿಸುವುದು.

3)   ಸೋಲಿಗ ಬುಡಕಟ್ಟು ಸಮುದಾಯ ಮಾಹಿತಿ ತಂತ್ರಜ್ಞಾನ ಮಹಾಸ್ಪೋಟದ ಸಂದರ್ಭದಲ್ಲಿ ತನ್ನ ಜನಪದ ಸಂಸ್ಕøತಿಯ ಅಂಶಗಳಾದ ಜನಪದ ಸಾಹಿತ್ಯಗಳಾದ ಗೀತೆ, ಕಥೆ, ಪುರಾಣ, ಗಾದೆ, ಒಗಟು ಹಾಗೂ ಜನಪದ ಕಲೆಗಳೊಂದಿಗೆ ತನ್ನ ವಿಸ್ತಾರತೆಯನ್ನು ಪಡೆದುಕೊಳ್ಳುತ್ತಿರುವುದು ತಿಳಿಸುವುದು.

4)  ಡಿಜಿಟಲ್ ಯುಗದಲ್ಲಿ ಜಾಗತಿಕ ಭಾಷೆಗಳ ಎದುರು ಸೋಲಿಗ ಬುಡಕಟ್ಟು ಭಾಷೆ ಹೇಗೆ ಜನಸಾಮಾನ್ಯರ ವ್ಯವಹಾರಿಕ ಭಾಷೆಯಾಗಿ ಒಂದು ಜೀವಂತ ಭಾಷೆಯಾಗಿದೆ ಎಂಬುದನ್ನು ತಿಳಿಯಪಡಿಸುವುದು.

 

ಅಧ್ಯಯನದ ವಿಧಾನ

ಪ್ರಸ್ತುತ ಅಧ್ಯಯನದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಾಮಗ್ರಿಯಾಗಿ ಕ್ಷೇತ್ರಕಾರ್ಯವನ್ನು ಮಾಡಿ ಕಂಡುಬಂದ ಅಂಶಗಳನ್ನು ಗುರುತಿಸಿ ಇಲ್ಲಿ ದಾಖಲಿಸಲಾಗಿದೆ ಹಾಗೂ ಅನುಸಂಗಿಕ ಸಾಮಾಗ್ರಿಗಳನ್ನು ಅಧ್ಯಯನ ಮಾಡಿ ವಿಶ್ಲೇಷಣೆ ವಿಧಾನದ ಮೂಲಕ ಸಂಶೋಧನ ಲೇಖನವನ್ನು ಸಾದರಪಡಿಸÀಲಾಗಿದೆ.

 

ಸೋಲಿಗ ಸಮುದಾಯದ ಪಾರಂಪರಿಕ ಮತ್ತು ಆಧುನಿಕತೆಯ ಪ್ರವೃತ್ತಿಗಳು

ಸೋಲಿಗ ಬುಡಕಟ್ಟು ಸಮುದಾಯ ತನ್ನ ಪರಂಪರೆಯನ್ನು ಉಳಿಸಿಕೊಂಡು ಅವುಗಳೊಡನೆ ಕಾಲಚಕ್ರಕ್ಕೆ ತಕ್ಕಂತೆ ಕೆಲವೊಂದಷ್ಟು ಬದಲಾವಣೆಗಳೊಂದಿಗೆ ತನ್ನ ಸಂಸ್ಕøತಿಯನ್ನು ಕಟ್ಟಿಕೊಂಡು ಕಾಡಿನೊಡನೆ ತಮ್ಮ ಬದುಕನ್ನು ಇಂದಿಗೂ ಸಾಗಿಸುತ್ತಾ ಬಂದಿದ್ದಾರೆ. ಕುಲಪದ್ಧತಿಯಂತೆ ಮದುವೆ ನಡೆಯುತ್ತಿದ್ದು ಬಹಳ ಸರಳವಾಗಿ ನಡೆಯುತ್ತವೆ. ಇವರು ಒಂದೇ ಕುಲದೊಳಗೆ ಹೆಣ್ಣು ತಂದು ಮದುವೆ ಆಗುವುದಿಲ್ಲ. ತಮ್ಮ ಜಾತಿಯ ವಿವಿಧ ಕುಲಗಳಲ್ಲಿ ಅಥವಾ ಪಂಗಡಗಳಲ್ಲಿಯ ಸಂಗಾತಿಗಳನ್ನು ಹುಡುಕಿಕೊಂಡು ವಿವಾಹ ಮಾಡಿಕೊಳ್ಳುತ್ತಾರೆ. ಆಧುನಿಕತೆಯ ಅಥವಾ ಶೈಕ್ಷಣಿಕವಾಗಿ ಮುಂದುವರಿದವರು ಅಂತರ್ಜಾತಿ ವಿವಾಹಗಳನ್ನು ಮಾಡಿಕೊಂಡಿರುವುದು ಸಹ ಕಂಡುಬರುತ್ತದೆ. ಸಾಮಾನ್ಯವಾಗಿ ಇವರು ವಿಭಕ್ತ ಕುಟುಂಬ ವ್ಯವಸ್ಥೆಯನ್ನು ಒಪ್ಪಿಕೊಂಡು ಬಂದಿದ್ದಾರೆ. ಸ್ತ್ರೀಗೆ ವಿಶೇಷ ಗೌರವ ನೀಡುವ ಇವರಲ್ಲಿ ಕನ್ಯಾ ಶುಲ್ಕ ಪದ್ಧತಿ ಇದೆ. ಋತುಮತಿಯಾದವರನ್ನು ತಾತ್ಕಾಲಿಕವಾಗಿ ಪ್ರತ್ಯೇಕವಾಗಿರಿಸುತ್ತಾರೆ. ಕುಟುಂಬದ ಹಿರಿಯ ಪುರುಷನೇ ಕುಟುಂಬದ ಯಜಮಾನನಾಗಿರುತ್ತಾನೆ. ಕುಲದ ಹಿರಿಯರು ಮತ್ತು ಪೋಡಿನ ಯಜಮಾನ ನಿರ್ವಹಿಸುವ ಕಟ್ಟೆಮನೆಗಳು ಪ್ರತಿಪೋಡಿನಲ್ಲೂ ಇದ್ದು, ಇಂದಿಗೂ ನ್ಯಾಯಪಂಚಾಯಿತಿಯ ಚಟುವಟಿಕೆಯನ್ನು ನಡೆಸಿಕೊಂಡುಬರುತ್ತಿವೆ. ಇವರು ವ್ಯಭಿಚಾರ ಹಾಗೂ ದುರ್ನಡತೆಗಳಿಗೆ ಕಠಿಣ ಶಿಕ್ಷೆಗಳನ್ನು ವಿಧಿಸುತ್ತಾರೆ. ಇತ್ತೀಚಿಗೆ ಸೋಲಿಗರು ಸಹ ಸ್ಥಳೀಯ ಹಾಗೂ ವಲಯಮಟ್ಟದ ರಾಜಕೀಯ ಆರ್ಥಿಕ ಚಟುವಟಿಕೆಗಳಲ್ಲಿ ಪ್ರವೇಶಿಸುತ್ತಿರುವುದು ಆಧುನಿಕತೆಯ ಕಡೆಗೆ ನಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

ಸೋಲಿಗರು ಸಾಮಾನ್ಯವಾಗಿ ನಾಡಿನ ಜನರಂತೆ ಪಂಚೆ ಮತ್ತು ಅಂಗಿ ಅಥವಾ ದೋತ್ರವನ್ನು ಸ್ತ್ರೀಯರು ಸೀರೆಯನ್ನು ಉಡುಪಾಗಿ ಧರಿಸುತ್ತಾರೆ. ಆದರೆ ಪುರುಷರು ಇಂದು ರೆಡಿಮೇಡ್ ಅಂಗಿಗಳು, ಜೀನ್ಸ್ ಪ್ಯಾಂಟ್, ಶರ್ಟ್, ಟೀಶರ್ಟ್ಗಳನ್ನು ಹಾಗೂ ಸ್ತ್ರೀಯರು ಚೂಡಿಧಾರ್, ಪ್ಯಾಂಟ್, ನೈಟಿಗಳನ್ನು ಹುಡುಗಿಯರು ಟೀಶರ್ಟ್-ಪ್ಯಾಂಟ್ಗಳನ್ನು ಧರಿಸುತ್ತಿದ್ದು ಆಧುನಿಕತೆಯ ಜೀವನ ಶೈಲಿಗೆ ಒಳಗಾಗುತ್ತಿದ್ದಾರೆ. ಬಹುತೇಕವಾಗಿ ಸೋಲಿಗರು ಶಿಕ್ಷಣ ವಂಚಿತರಾಗಿದ್ದು ಇತ್ತೀಚಿಗೆ ಪುರುಷರಿಗಷ್ಟೇ ಅಲ್ಲದೇ ಮಹಿಳೆಯರಿಗೂ ತಕ್ಕಮಟ್ಟಿಗೆ ಶಿಕ್ಷಣ ಕೊಡಬೇಕೆಂಬ ಅರಿವು ಇತ್ತೀಚಿಗೆ ಮೂಡಿದೆ.

ಬಿದಿರು ಅಚ್ಚೆಗಳಿಂದ, ಈಚಲು ಮರದ ಸೊಗೆಗಳಿಂದ ನಿರ್ಮಾಣ ಮಾಡಿಕೊಂಡ ಪುಟ್ಟ ಗುಡಿಸಲು, ಮನೆಗಳಲ್ಲಿ ವಾಸ ಮಾಡುತ್ತಿದ್ದ ಇವರು ಸರ್ಕಾರವು ನೀಡಿದ ವಸತಿ ಸೌಕರ್ಯದಿಂದಾಗಿ ಅವರ ವಸತಿಗೃಹಗಳ ವಿನ್ಯಾಸದಲ್ಲಿಯೂ ಆಗಾಧವಾದ ಬದಲಾವಣೆಗಳಾಗಿವೆ. ಇಟ್ಟಿಗೆ ಮತ್ತು ಕಲ್ಲುಗಳನ್ನು ಬಳಸಿ ಕಟ್ಟಿದ ಹೆಂಚಿನ ಮನೆಗಳು, ಕಾಂಕ್ರೀಟ್ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಬಹುಪಾಲು ಮನೆಗಳು ವಿದ್ಯುತ್ ಸಂಪರ್ಕಗಳನ್ನು ಪಡೆದುಕೊಂಡಿವೆ. ಟಿ.ವಿ., ರೇಡಿಯೋ, ಪತ್ರಿಕೆ ಮುಂತಾದ ವಿಜ್ಞಾನ ಮತ್ತು ತಂತ್ರಜ್ಞಾನ ಸೌಲಭ್ಯ ಇವರಿಗೆ ಒದಗುತ್ತಿದೆ. ಕಾರಣದಿಂದ ಇವರ ಸಾಮಾಜಿಕ ಜೀವನ ಕೊಂಚ ವೇಗದಲ್ಲಿಯೇ ಆಧುನಿಕತೆಯತ್ತ ಸಾಗುತ್ತಿದೆ.

ಕೇತ್ಲು ಬೇಸಾಯ ಪದ್ಧತಿಯನ್ನು ರೂಢಿಸಿಕೊಂಡು ಪಾರಂಪರಿಕ ಕೃಷಿಯ ಮೂಲಕ ರಾಗಿ, ನವಣೆ, ಅವರೆ, ಜೋಳ, ಹೀರೆಕಾಯಿ, ಕುಂಬಳಕಾಯಿಗಳಂತಹ ಬೆಳೆಗಳನ್ನು ಬೆಳೆದು ಬದುಕು ನಡೆಸುತ್ತಿದ್ದ ಇವರು ಇತ್ತೀಚಿಗೆ ಕೊಳವೆ ಬಾವಿಯ ನೀರಾವರಿ ಮೂಲಕ ಬಾಳೆ, ಕಬ್ಬು, ಅರಿಶಿನ, ರೇಷ್ಮೆ ಕೃಷಿ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನರ್ಸರಿಗಳನ್ನು ನಿರ್ಮಾಣವಾಗಿವೆ. ಕಾಫಿ ಬೆಳೆಗೆ ಸೂಕ್ತ ವಾತಾವರಣವಿರುವ ಬೆಟ್ಟಗುಡ್ಡಗಳ ತೋಟಗಳಲ್ಲಿ ಸಹಕಾರಿ ಕಾಫಿ ಪ್ಲಾಂಟೇಷನ್ ಮಾಡುವುದಕ್ಕೆ ಸರ್ಕಾರ ಪ್ರೋತ್ಸಾಹ ನೀಡಲು ಮುಂದಾಗಿದ್ದು, ನರ್ಸರಿ ನಿರ್ಮಾಣ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆಗೆ ತರಬೇತಿ ನೀಡುವುದರ ಜೊತೆಗೆ ಹಣಕಾಸು ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಪಾರಂಪರಿಕ ವೃತ್ತಿಗಳಾದ ಬಿದಿರಿನ ಬುಟ್ಟಿ ನೇಯುವುದು, ಜೇನು ಸಾಕುವುದು ಪೂರಕ ವೃತ್ತಿಗಳನ್ನು ಅವಲಂಬಿಸಿಕೊಂಡು ಬದುಕುತ್ತಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಓದಿರುವ ಜಡೆಸ್ವಾಮಿ ಮಾದಯ್ಯ ಎಂಬುವವರು ಪರಿಸರ ವಿಶ್ಲೇಷಕನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಸಸ್ಯ, ಪ್ರಾಣಿ ಮತ್ತು ಪಕ್ಷಿಗಳ ಕುರಿತು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ವಿಶ್ಲೇಷಿಸಲು ಶಕ್ತನಾಗಿದ್ದು, ಇದನ್ನೇ ತನ್ನ ಕೆಲಸವನ್ನಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡಿದ್ದಾರೆ. ಫೇಸ್ಬುಕ್, ಟ್ವಿಟರ್ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ಇವುಗಳ ಕುರಿತ ಮಾಹಿತಿ ನೀಡುತ್ತಾ ಸಕ್ರಿಯರಾಗಿದ್ದಾರೆ. ಅಮೇರಿಕಾದಲ್ಲಿ ಕಾಡಿನ ರಕ್ಷಣೆ ಮತ್ತು ಸುಸ್ಥಿತ ಅಭಿವೃದ್ಧಿ ಕುರಿತು ವಿಷಯ ಮಂಡಿಸಿದ, ಕಾಡು ರಕ್ಷಣೆಯ ಕುರಿತಾಗಿ ಪಿಎಚ್.ಡಿ. ಪಡೆದಿರುವ ಸೋಲಿಗರ ತಜ್ಞರಾದ ಚಿಕ್ಕನಂಜೇಗೌಡರು ರೀತಿಯ ಪ್ರಬಂಧ ಮಂಡಿಸಿದ ಮೊದಲ ಸೋಲಿಗ ವ್ಯಕ್ತಿಯಾಗಿ ಪ್ರಶಂಸೆಗೆ ಪಡೆದರು ಹಾಗೂ ಆಧುನಿಕತೆಯ ಪ್ರಸ್ತುತದಲ್ಲಿ ಸೋಲಿಗರ ಪಾತ್ರದ ಬಗ್ಗೆ ಜಾಗತಿಕ ಮಟ್ಟದಲ್ಲಿ ತಿಳಿಯುವಂತೆ ಮಾಡಿದರು.

ಸೋಲಿಗರು ಪ್ರಾಣಿ ಬೇಟೆ, ಮೀನು ಬೇಟೆ, ಜೇನು ಬೇಟೆಗಳಂತಹ ಪಾರಂಪರಿಕ ವಿಧಾನಗಳಿಂದ ಅನುಸರಿಸಿ ಆಹಾರವನ್ನು ಉತ್ಪಾದಿಸಿಕೊಳ್ಳುತ್ತಿದ್ದರು. ಇತ್ತೀಚಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿರುವುದರಿಂದ ಪ್ರಾಣಿಗಳ ಬೇಟೆ ಅಪರಾಧವಾಗಿದ್ದು ಬೇಟೆಗಾರಿಕೆಯ ಪಾರಂಪರಿಕ ಕಸುಬುನ್ನು ಬಿಡುವಂತಾಗಿದೆ. ಆದರೂ ಸಹ ಪ್ರಾಣಿಗಳ ಜೊತೆಗಿನ ಅವರ ಪಾರಂಪರಿಕ ಜ್ಞಾನ ಕಡಿಮೆಯಾಗಿಲ್ಲ. ಶಾರ್ಪ್ ಶೂಟರ್ಸ್, ಅರವಳಿಕೆ ತಜ್ಞರು ಹಾಗೂ ಇತರೆ ಅರಣ್ಯ ಸಿಬ್ಬಂದಿಗಳು ಸೇರಿದಂತೆ 400 ಸಂಖ್ಯೆಯಷ್ಟು ಜನರು ನರಭಕ್ಷಕ ಹುಲಿಯನ್ನು ಸೆರೆಹಿಡಿಯಲು ಸಾಧ್ಯವಾಗದಿದ್ದಾಗ ಪುಣಜನೂರಿನ ಸೋಲಿಗ ತಂಡ ಹುಲಿಯ ಜಾಡನ್ನು ತಿಳಿದು ಸೆರೆದಿರುವುದು ಕಾಡುಪ್ರಾಣಿಗಳ ಬಗೆಗೆ ಇರುವ ಅವರ ಪಾರಂಪರಿಕ ಜ್ಞಾನಕ್ಕೆ ನಿದರ್ಶನವಾಗಿದೆ.

ಬುಡಕಟ್ಟು ಜನರು ಆರೋಗ್ಯದಲ್ಲಿ ಉತ್ತಮವಾಗಿಯೂ, ದೈಹಿಕವಾಗಿ ಗಟ್ಟಿಮುಟ್ಟಾಗಿ ಇರುತ್ತಾರೆ. ಅವರ ಉತ್ತಮ ಆರೋಗ್ಯಕ್ಕೆ ಕಾಡಿನಲ್ಲಿ ಕಲುಷಿತಗೊಳ್ಳದ ಆಹಾರ ಸೇವನೆ ಪ್ರಮುಖವಾದ ಕಾರಣವಾಗಿರುತ್ತದೆ. ಸ್ತ್ರೀಯರ ಹೆಚ್ಚಿನ ಹೆರಿಗೆಗಳು ಸರಳವಾಗಿ ನಡೆಯುತ್ತವೆ. ಸಾಮಾನ್ಯ ಗರ್ಭಿಣಿಯರನ್ನು ಅಂಗಾತ ಮಲಗಿಸಿ ಹೆರಿಗೆ ಮಾಡಿಸಲಾಗುತ್ತದೆ. ಆದರೆ ಸೋಲಿಗರು ಗರ್ಭಿಣಿಯರನ್ನು ಕೂರಿಸಿ ಹೆರಿಗೆ ಮಾಡಿಸಲಾಗುತ್ತದೆ. ಕೆಲವು ವೇಳೆ ಆರೋಗ್ಯದ ಸಮಸ್ಯೆಗಳಾದಾಗ ತಮಗೆ ಬರುವಂತಹ ರೋಗರುಜಿನಗಳಿಗೆ ಕಾಡಿನಲ್ಲಿ ದೊರೆಯುವ ಗಿಡಮೂಲಿಕೆಗಳಿಂದಲೇ ವೈದ್ಯ ಮಾಡುತ್ತಿದ್ದ ಇವರು ಆಧುನಿಕ ವೈಜ್ಞಾನಿಕ ವೈದ್ಯ ಪದ್ಧತಿಯನ್ನೇ ಅವಲಂಬಿಸಿದ್ದಾರೆ. ಹಲವಾರು ಎನ್.ಜಿ..ಗಳು ಸೋಲಿಗ ಸಮುದಾಯ ಅಭಿವೃದ್ಧಿಗಾಗಿ ಶ್ರಮಿಸಿದ್ದು ಅವರ ಶಿಕ್ಷಣ ಮತ್ತು ಆರೋಗ್ಯ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

ಬಿಳಿಗಿರಿರಂಗನಾಥಸ್ವಾಮಿ ಇವರ ಮುಖ್ಯ ದೈವವಾಗಿದೆ. ಜೊತೆಗೆ ಜಡೇಸ್ವಾಮಿ, ಬಸವೇಶ್ವರ, ದೊಡ್ಡ ಸಂಪಿಗೆ ದೇವರು, ಚಿಕ್ಕಸಂಪಿಗೆ ದೇವರನ್ನು ಆರಾಧಿಸುತ್ತಾರೆ. ಸೋಲಿಗರುಭಾವಎಂದು ಕರೆಯುವ ಬಿಳಿಗಿರಿರಂಗನಾಥ ದೇವರಿಗೆ ಬೆಟ್ಟದ ಮೇಲೆ ಒಂದು ಚಾರಿತ್ರಾರ್ಹವಾದ ಒಂದು ದೇವಾಲಯವಿದೆ. ಇದರ ಅರ್ಚಕರು ಹಾಗೂ ಪ್ರಧಾನ ಅರ್ಚರು ಸೋಲಿಗರೇ ಆಗಿರುತ್ತಾರೆ. ಇಲ್ಲಿ ಚಪ್ಪಲಿ ಸೇವೆ ವಿಶೇಷವಾಗಿರುತ್ತದೆ. ಬಿಳಿಗಿರಿರಂಗನಾಥಸ್ವಾಮಿಗೆ ಪ್ರತಿವರ್ಷದಂತೆ ಉತ್ಸವದ ವೇಳೆಯಲ್ಲಿ ಒಂದು ಜೊತೆ ಚಪ್ಪಲಿಯನ್ನು ಸೇವಾರೂಪದಲ್ಲಿ ಅರ್ಪಿಸಲಾಗುತ್ತದೆ. ದೇವರ ಪಾದರಕ್ಷೆ ನಿರ್ಮಾಣಕ್ಕೆ ವಂಶಪಾರಂಪರ್ಯವಾಗಿ ಬೇರೆ ಬೇರೆ ಊರಿನ ಎರಡು ಊರುಗಳ ಕುಟುಂಬದವರು ತಲಾ ಒಂದೊಂದು ಚಪ್ಪಲಿ ತಯಾರಿಸುತ್ತಾರೆ. ಆದರೆ ಪೂಜೆಗೆ ತಂದಾಗ ಅವುಗಳ ವಿನ್ಯಾಸ, ಚಿತ್ತಾರದ ಕಲೆ, ಅಳತೆ ಒಂದೇ ಆಗಿರುತ್ತದೆ. ದೇವಾಲಯದ ಪೆಟ್ಟಿಗೆಯಲ್ಲಿಡುತ್ತಾರೆ. ಭಕ್ತರಿಗೆ ಅವುಗಳಿಗೆ ಆಶೀರ್ವದಿಸುತ್ತಾರೆ. ಚಪ್ಪಲಿಗಳು ಮುಂದಿನ ಜಾತ್ರೆಯ ವೇಳೆಗೆ ಕ್ರಮೇಣವಾಗಿ ಸವೆಯುತ್ತವೆ. ಬಿಳಿಗಿರಿರಂಗನಬೆಟ್ಟದ ಸೋಲಿಗರು ಆಚರಣೆ ಮಾಡುವ ರೊಟ್ಟಿಹಬ್ಬ ಪ್ರಮುಖವಾದ ಹಬ್ಬವಾಗಿದೆ. ರೊಟ್ಟಿಯನ್ನು ಮಾಡಿ ಅದನ್ನು ದೇವರಿಗೆ ಅರ್ಪಿಸಿ ಪ್ರಸಾದವನ್ನು ಪಡೆಯುತ್ತಾರೆ. ಗೊರುಕನ ಕುಣಿತ ಹಬ್ಬದಲ್ಲಿ ಕಂಡುಬರುವ ವಿಶೇಷ ನೃತ್ಯ. ಇದು ಜಾಗತಿಕ ಮಟ್ಟದಲ್ಲಿಯೂ ಸಹ ಗುರುತಿಸಿಕೊಂಡಿದೆ. ಅಲ್ಲದೇ ಹೊಸರಾಗಿ ಹಬ್ಬ, ಮಾರಿಹಬ್ಬಗಳನ್ನು ಆಚರಣೆ ಮಾಡುತ್ತಾರೆ. ಮಲೆಯ ಮಹದೇಶ್ವರ ಜಾತ್ರೆಯಲ್ಲಿ ಪ್ರಥಮ ಪೂಜೆ ಸೋಲಿಗರದ್ದೇ ಆಗಿರುತ್ತದೆ. ಆಧುನಿಕತೆ ಪ್ರಭಾವದಿಂದಾಗಿ ಬುಡಕಟ್ಟು ಸಮುದಾಯಗಳು ಸಹ ಸಾಮಾನ್ಯವಾಗಿ ಮಹಾನವಮಿ, ದೀಪಾವಳಿ, ಕಾರ್ತೀಕ, ಶಿವರಾತ್ರಿ ಹಬ್ಬಗಳನ್ನು ಆಚರಣೆ ಮಾಡುತ್ತಾರೆ.

ಕನ್ನಡವನ್ನು ಮಾತೃಭಾಷೆಯನ್ನಾಗಿ ಮಾತಾಡುವ ಸೋಲಿಗರ ಭಾಷೆಯನ್ನುಸೋಲಿಗ ನುಡಿಎಂದು ಕರೆಯಲಾಗುತ್ತದೆ. ಸೋಲಿಗ ಬುಡಕಟ್ಟು ಸಮುದಾಯ ಮಾಹಿತಿ ತಂತ್ರಜ್ಞಾನ ಮಹಾಸ್ಪೋಟದ ಸಂದರ್ಭದಲ್ಲಿ ತನ್ನ ಜನಪದ ಸಂಸ್ಕøತಿಯ ಅಂಶಗಳಾದ ಜನಪದ ಸಾಹಿತ್ಯಗಳಾದ ಗೀತೆ, ಕಥೆ, ಪುರಾಣ, ಗಾದೆ, ಒಗಟು ಹಾಗೂ ಜನಪದ ಕಲೆಗಳೊಂದಿಗೆ ತನ್ನ ವಿಸ್ತಾರತೆಯನ್ನು ಪಡೆದುಕೊಳ್ಳುತ್ತಿದೆ. ಯಾವುದೇ ಚಟುವಟಿಕೆ ಕ್ರಿಯಾಶೀಲವಾಗಿರಲು ಭಾಷೆ ಮುಖ್ಯ. ಭಾಷೆ ಇಲ್ಲವೆಂದರೆ ಜಗತ್ತೆ ಸ್ಥಗಿತಗೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಜಾಗತಿಕ ಭಾಷೆಗಳ ಎದುರು ಸೋಲಿಗ ಬುಡಕಟ್ಟು ಭಾಷೆ ಜನಸಾಮಾನ್ಯರ ವ್ಯವಹಾರಿಕ ಭಾಷೆಯಾಗಿ ಬಳಕೆಗೊಳ್ಳುತ್ತಿದ್ದು ಭಾಷೆಯ ಜೀವಂತಿಕೆಯನ್ನು ತಿಳಿಸುತ್ತದೆ.

ಮೂಲೆಯಲ್ಲಿರುವ ಎಂತಹ ಬುಡಕಟ್ಟು ಭಾಷೆಯೇ ಇರಬಹುದು ಅಥವಾ ಅದು ಪ್ರಬುದ್ಧ ಭಾಷೆಯೇ ಆಗಿರಬಹುದು ಎಲ್ಲವೂ ಇಲ್ಲಿ ಅವಕಾಶಗಳನ್ನು ಪಡೆದು ಬಳಕೆಗೊಳ್ಳುತ್ತವೆ. ಲಿಪಿಗಳಿಲ್ಲದ ಭಾಷೆಗಳು ಸಹ ಇತರೆ ಭಾಷೆಗಳ ಸಹಕಾರಗಳಿಂದ ಮೊಬೈಲ್ನಲ್ಲಿ ಬಳಕೆಗೆ ಬರುತ್ತದೆ. ಭಾಷೆಯೊಂದು ಅವನತಿ ಹೊಂದುತ್ತಿದೆ ಎಂದು ಹೇಳುತ್ತಿರುವ ಸಂದರ್ಭದಲ್ಲಿ ದುರ್ಬಲ ಭಾಷೆಗಳು ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡು ಬಳಕೆಗೆ ಬರುವುದಕ್ಕೆ ಪ್ರಸ್ತುತದಲ್ಲಿ ಮೊಬೈಲ್ ಅನುಕೂಲಕರವಾಗಿ ಕಂಡುಬರುತ್ತಿದೆ. ಏಕೆಂದರೆ ತಂತ್ರಜ್ಞಾನವು ಇಂದು ಸಂಸ್ಕøತಿಯನ್ನು ತನ್ನ ಭಾಷೆಯನ್ನಾಗಿ ಮಾಡಿಕೊಂಡು ಪ್ರತಿಯೊಬ್ಬರಿಗೂ ತಲುಪುವ ಯೋಜನೆ ಮಾಡುತ್ತಿದೆ. ಸ್ಥಳೀಯ ಭಾಷೆಗಳ ಮೂಲಕ ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಸ್ಕøತಿಯನ್ನು ಒಳಗೊಂಡಂತೆ ಒಂದು ಸಂಪರ್ಕ ಮಾಧ್ಯಮವಾಗಿ ಬಳಕೆಗೊಂಡು ತಮ್ಮ ದಿನನಿತ್ಯದ ಬದುಕಿಗೆ ಆಸರೆಯಾಗಿ ನಿಂತಿದೆ. ಆದಾಗ್ಯೂ ಬುಡಕಟ್ಟು ಭಾಷೆಗಳು ಇವುಗಳೊಡನೆ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿರುವುದು ವಾಸ್ತವ ಸತ್ಯಸಂಗತಿಯೂ ಆಗಿದೆ.

ಆಧುನಿಕತೆ ಎಂದರೆ ಸಾಕ್ಷರತೆ ಮತ್ತು ತಾಂತ್ರಿಕೆಯ ಬೆಳವಣಿಗೆಯನ್ನು ಕುರಿತದ್ದು. ಆದಾಗ್ಯೂ ಜಾನಪದವನ್ನು ಸಾಂಪ್ರದಾಯಿಕವಾಗಿ ಆಧುನಿಕ ಪೂರ್ವ ಸಾಮಾಜಿಕ ಸ್ಥಿತಿಗಳೊಂದಿಗೆ ಸಂಬಂಧಿಸಲಾಗುತ್ತದೆ. ಜನಪದ ಜೀವನ ಮತ್ತು ಆಧುನಿಕತೆಯ ವಿರುದ್ಧ ಲಕ್ಷಣಗಳನ್ನು ಒಂದು ಪೂರ್ವಕಲ್ಪಿತ ಭಾವನೆಯ ಮೇಲೆ ಗುರುತಿಸಲಾಗಿದೆ. ಅದೆಂದರೆ ಆಧುನಿಕತೆ ಸಕರಾತ್ಮಕವಾದುದು. ತಾಂತ್ರಿಕತಾ ಪ್ರಧಾನವಾದುದು. ವಿಚಾರಯುಕ್ತವಾದುದು. ಏರುಮುಖ ಪ್ರಗತಿಯಲ್ಲಿ ನಂಬಿಕೆಯಳ್ಳದ್ದು, ಸಮಗ್ರ ಸತ್ಯಗಳನ್ನುಳ್ಳದ್ದು, ಸಾಮಾಜಿಕ ಶ್ರೇಣಿಗಳನ್ನು ವೈಚಾರಿಕವಾಗಿ ಯೋಜಿಸುವಂಥದ್ಧು, ಜ್ಞಾನಕ್ಕೆ ಮತ್ತು ಉತ್ಪಾದನೆಗೆ ಒಂದು ಉನ್ನತ ಗುಣ ತಂದುಕೊಡತಕ್ಕದ್ದು”[2] ಎಂಬೆಲ್ಲಾ ವಿಚಾರಗಳ ನಡುವೆಯೂ ಸಹ ಸೋಲಿಗ ಬುಡಕಟ್ಟು ಸಮುದಾಯ ಇಂದಿಗೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಆಧುನಿಕತೆಯೊಡನೆ ದೇಶಿಕರಣಗೊಳ್ಳುವುದಲ್ಲದೇ ಜಾಗತಿಕವಾಗಿಯೂ ತನ್ನನ್ನು ತೆರೆದುಕೊಳ್ಳುತ್ತಿದೆ.

 

ಫಲಿತಗಳು

1) ತಮ್ಮ ಆಚರಣೆಗಳಲ್ಲಿ ಇದ್ದಂತಹ ಮೂಢನಂಬಿಕೆಗಳು ಕಡಿಮೆಯಾಗಿ ಸ್ವಲ್ಪ ವೈಚಾರಿಕತೆಯನ್ನು ಬೆಳೆಸಿಕೊಂಡಿರುವುದು ಕಂಡುಬಂದಿದೆ.

2)    ಸೋಲಿಗ ಸಮುದಾಯವು ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದ ನಾಡಿನ ಹಾಗೂ ಜಾಗತಿಕ ಸಂಪರ್ಕಕ್ಕೆ ತೆರೆದುಕೊಂಡಿದೆ.

3)   ಅನೇಕ ಬುಡಕಟ್ಟು ಭಾಷೆಗಳು ನಶಿಸುತ್ತಿರುವ ಸಂದರ್ಭದಲ್ಲಿ ಸೋಲಿಗರ ಭಾಷೆಯು ಜೀವಂತವಾಗಿರುವುದನ್ನು ಕಾಣಬಹುದು.

4)          ಸೋಲಿಗರ ಸಮುದಾಯದ ಮೇಲೆ ಅರಣ್ಯ ಅಧಿಕಾರಗಳ ನಿಯಂತ್ರಣ ಹೆಚ್ಚುತ್ತಿದೆ.

5)  ಶಿಕ್ಷಣ ಹಾಗೂ ಆರ್ಥಿಕ ಸಹಾಯದಿಂದ ಇವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡಿದೆ.

 

ಉಪಸಂಹಾರ

ಒಂದು ಸಂಸ್ಕøತಿಯನ್ನು ಇನ್ನಾವುದೋ ಒಂದು ಸಂಸ್ಕøತಿಗೆ ಹೋಲಿಕೆ ಮಾಡಿ ನೋಡದೇ ತನ್ನದೇ ಆದ ಕುಲಪ್ರತಿಷ್ಠೆಯ ಮೂಲ ಸಂಸ್ಕøತಿಯನ್ನು ಉಳಿಸುವ ಸಾಂಸ್ಕøತಿಕ ಸಾಪೇಕ್ಷತೆ ಪರಿಕಲ್ಪನೆ ಇರಬೇಕು. ಕೇಂದ್ರದಿಂದ ಪರಿಧಿಯತ್ತ, ಸಾರ್ವತ್ರಿಕರಣದಿಂದ ಸ್ಥಳೀಯತೆಯತ್ತ, ದೇಶೀಕರಣ ಪ್ರಕ್ರಿಯೆಯಿಂದ ಜಾಗತೀಕರಣದ ಪ್ರಕ್ರಿಯೆಯತ್ತ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಪರಸ್ಪರ ವಿರೋಧಿಸುವ ತಾರ್ಕಿಕ ವೈರುಧ್ಯಗಳಿಂದ ಬಹುಳತೆಯಿಂದ ಕೂಡಿದ ಸಹಕಾರ ಆಧಾರಿತ ಮತ್ತು ಸಹಯೋಗಿ ವ್ಯವಸ್ಥೆಗಳು ಸಾಮಾಜಿಕವಾಗಿ ವ್ಯವಹರಿಸುವಿಕೆಯನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆಗಳು ಇಂದು ನಮ್ಮ ಮುಂದಿವೆ.

ಆಧುನಿಕತೆಯ ಪರಿಕಲ್ಪನೆಗಳಾದ ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನಗಳು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಗೊಂಡು ಪ್ರಪಂಚದಲ್ಲಿ ನಾಗಲೋಟದ ಓಟದಲ್ಲಿ ಕರೆದೊಯ್ಯುತ್ತಿದೆ. ಆದರೂ ಸಹ ಅದೆಷ್ಟು ಬುಡಕಟ್ಟು ಇಂದಿಗೂ ಸಹಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗುಎಂಬ ಜನಪದ ಗಾದೆಯ ಮಾತಿನಂತೆ ಪಾರಂಪರಿಕ ಜ್ಞಾನವನ್ನು ತನ್ನೊಡಲಲ್ಲಿರಿಸಿಕೊಂಡು ಅನನ್ಯತೆಯನ್ನು ಸಾಧಿಸುತ್ತಿವೆ.

 

ಪರಾಮರ್ಶನ ಗ್ರಂಥಗಳು

1)  ಅರವಿಂದ ಮಾಲಗತ್ತಿ (ಪ್ರ.ಸಂ.), ‘ಕನ್ನಡ ವಿಷಯ ವಿಶ್ವಕೋಶ-ಜಾನಪದ’, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, 2006.

2) ಅಂಗಡಿ.ಎಸ್.ಎಸ್., ಕರ್ನಾಟಕ ಬುಟಕಟ್ಟು ಭಾಷೆ, ಸೃಷ್ಟಿ ಪಬ್ಲಿಕೇಷನ್ಸ್, ವಿಜಯನಗರ, ಬೆಂಗಳೂರು, 2008.

3)      ಕೃಷ್ಣಪ್ಪ.ಕೆ., ಸಂಸ್ಕøತಿಯ ಅಂತರಶಿಸ್ತೀಯ ನೆಲೆಗಳು, ಸಂಯಮ ಪ್ರಕಾಶನ, ಹೊಸಕೋಟೆ, 2008.

4)      ಚಂದ್ರಪ್ಪ.ಸಿ., ಭಾರತದ ನಗರೀಕರಣ, ಅಕ್ಷರ ಮಂಟಪ ಪ್ರಕಾಶನ, ಹಂಪಿನಗರ, ಬೆಂಗಳೂರು, 2013.

5) ತಿಪ್ಪೇಸ್ವಾಮಿ.ಜಿ.ಆರ್. ಮತ್ತು ಡಾ. ರಂಗಾರೆಡ್ಡಿ ಕೋಡಿರಾಂಪುರ, ‘ಜಾನಪದ ಆನ್ವಯಿಕತೆಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಭವನ, ಬೆಂಗಳೂರು, 2003.

6)   ನಾರಾಯಣ ಕಿಕ್ಕೇರಿ, ಬುಡಕಟ್ಟು ಸಂಸ್ಕøತಿ, ಅರುಹು-ಕುರುಹು ತ್ರೈಮಾಸಿಕ ಪತ್ರಿಕೆ, ಕುವೆಂಪು ನಗರ, ಮೈಸೂರು

7)  ಬೋರಲಿಂಗಯ್ಯ.ಹಿ.ಚಿ., ಒಂದು ಬುಡಕಟ್ಟು ಲೋಕದೃಷ್ಟಿ, ಎಂ.ಬೈರೇಗೌಡ ಪ್ರಗತಿ ಗ್ರಾಫಿಕ್ಸ್, ಹಂಪಿನಗರ, ಬೆಂಗಳೂರು, 2011.

8) ಲಕ್ಕಪ್ಪಗೌಡ.ಎಚ್.ಜೆ., ಕರ್ನಾಟಕ ಬುಡಕಟ್ಟುಗಳು ಸಂಪುಟ-1, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು, 1998.

 

ಕೊನೆಟಿಪ್ಪಣಿ

[1] ಅರವಿಂದ ಮಾಲಗತ್ತಿ (ಪ್ರ.ಸಂ.), ‘ಕನ್ನಡ ವಿಷಯ ವಿಶ್ವಕೋಶ-ಜಾನಪದ’, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, 2006. ಪು.ಸಂ.-881

[2] ನಾರಾಯಣ ಕಿಕ್ಕೇರಿ, ಬುಡಕಟ್ಟು ಸಂಸ್ಕøತಿ, ಅರುಹು-ಕುರುಹು ತ್ರೈಮಾಸಿಕ ಪತ್ರಿಕೆ, ಕುವೆಂಪು ನಗರ, ಮೈಸೂರು, ಪುಟ ಸಂಖ್ಯೆ-15

 

Comments

Popular posts from this blog

ಏಕೀಕರಣ ಚಳವಳಿ ಮತ್ತು ಸಾಹಿತ್ಯ